ವುಲ್ಫ್, ತಾಮಸ್ ಕ್ಲೇಟನ್
	1900-38. ಅಮೆರಿಕದ ಕಾದಂಬರಿ ಕಾರ. ಆತ್ಮಕಥಾರೂಪದ ಕಾದಂಬರಿಗಳಿಂದಾಗಿ ಪ್ರಸಿದ್ಧನಾಗಿದ್ದಾನೆ. ಈತ ಉತ್ತರ ಕರೋಲಿನದ ಅಶೇವಿಲ್ಲೆ ಎಂಬಲ್ಲಿ 1900 ಅಕ್ಟೋಬರ್ 3ರಂದು ಜನಿಸಿದ. ಉತ್ತರ ಕರೋಲಿನ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿದ(1920). ಅನಂತರ ಹಾರ್ವರ್ಡ್ ವಿಶ್ವವಿದ್ಯಾಲಯದ ಗ್ರಾಜುಯೆಟ್ ಸ್ಕೂಲ್‍ನಲ್ಲಿ ವ್ಯಾಸಂಗ ಮಾಡಿದ. ಹಾರ್ವಡ್‍ನಲ್ಲಿ ದ್ದಾಗ ಎರಡು ನಾಟಕಗ ಳನ್ನು ರಚಿಸಿದ. ಆದರೆ ಇವು ಸಾಹಿತ್ಯಾಸಕ್ತರ ಗಮನ ಸೆಳೆಯಲಿಲ್ಲ. ಅನಂತರ ಕಾದಂಬರಿಯ ಬರೆವಣಿಗೆಗೆ ತೊಡಗಿದ.  ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿ (1924), ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ ದುಡಿದ (1924-30).

	ಲುಕ್ ಹೋಮ್‍ವರ್ಡ್, ಏಂಜಲ್ (1929) ಎಂಬುದು ಇವನ ಮೊದಲ ಕಾದಂಬರಿ. ಇದರ ಮುಂದುವರಿದ ಭಾಗವಾದ ಆಫ್ ಟೈಮ್ ಅಂಡ್ ರಿವರ್ 1935ರಲ್ಲಿ ಪ್ರಕಟವಾಯಿತು. ದಿ ವೆಬ್ ಅಂಡ್ ದಿ ರಾಕ್ (1939), ಯು ಕೆನಾಟ್ ಗೊ ಹೋಮ್ ಎಗೇನ್ ಎಂಬ ಇನ್ನೆರಡು ಕಾದಂಬರಿಗಳು ಇವನ ನಿಧನಾನಂತರ ಪ್ರಕಟವಾದುವು. ಈತನ ಸಾಹಿತ್ಯಕ ಬದುಕಿನ ಮೇಲೆ ಗಾಢ ಪ್ರಭಾವ ಬೀರಿದ ಮಾಕ್ರ್ಸ್‍ವೆಲ್, ಇಪೆರ್‍ಕಿನ್ಸ್ ಎಂಬಾತ ಈ ಎರಡು ಕಾದಂಬರಿಗಳನ್ನು ಸಂಪಾದಿಸಿ ಪ್ರಕಟಿಸುವ ವ್ಯವಸ್ಥೆ ಮಾಡಿದ. ಮೊದಲಿನ ಎರಡು ಕಾದಂಬರಿಗಳ ನಾಯಕ ಯೂಜಿನ್ ಸಾಂಟ್; ಕಡೆಯ ಎರಡು ಕಾದಂಬರಿಗಳ ನಾಯಕ ಜಾರ್ಜ್ ವೆಬರ್. ಈ ನಾಲ್ಕೂ ಕಾದಂಬರಿಗಳಲ್ಲಿ ಈತನ ಬದುಕಿನ ಸಮಗ್ರ ವಿವರಗಳು ಸಾಹಿತ್ಯಕ ರೂಪ ಪಡೆದುಕೊಂಡಿವೆ. ಇವನ ಕಾದಂಬರಿಗಳಲ್ಲಿ ಬಂಧ, ವ್ಯವಸ್ಥೆ ಇಲ್ಲವೆಂದು ಕೆಲವು ವಿಮರ್ಶಕರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಸ್ವನಿಯಂತ್ರಣವಿಲ್ಲದ, ವಸ್ತುಗಳನ್ನು ಅರಗಿಸಿಕೊಳ್ಳದ ಬರೆವಣಿಗೆ ಇವನದೆಂದು ಅಭಿಪ್ರಾಯ ಪಡುತ್ತಾರೆ. ದಿ ಸ್ಟೋರಿ ಆಫ್ ದಿ ನಾವೆಲ್ (1936)ಎಂಬುದು ಈತ ತನ್ನ ಕಾದಂಬರಿಗಳ ಬಗ್ಗೆ ಬರೆದ ವಿಮರ್ಶಾಗ್ರಂಥ. ಫ್ರಮ್ ಡೆತ್ ಟು ಮಾರ್ನಿಂಗ್ (1935) ಎಂಬುದು ಸಣ್ಣಕಥೆಗಳ ಸಂಕಲನ. ಇಲ್ಲಿಯ ಬರೆವಣಿಗೆಯಲ್ಲಿ ಕಟು ವಾಸ್ತವತೆ ಮತ್ತು ಭಾವತೀವ್ರತೆ ಕಂಡುಬರುತ್ತವೆ. ಈತ 1938ರಲ್ಲಿ ನಿಧನನಾದ.	 
  (ಎನ್.ಎಸ್.ಎಲ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ